Sunday, February 11, 2007

ಶ್ರೀಮನ್ಮಹಾರಾಜರವರ ವಂಶಾವಳಿ - Annals of the Mysore Royal Family

ಶ್ರೀಮನ್ಮಹಾರಾಜರವರ ವಂಶಾವಳಿ - Annals of the Mysore Royal Family

೧ ನೆ ಯ ಅಧ್ಯಾಯ

ಚಂದ್ರವಂಶದ ದೊರೆಗಳು

ಪೂರ್ವದಲ್ಲಿ ಮಹಾವಿಷ್ಣುವಿನ ನಾಭಿಕಮಲದಿಂದ ಬ್ರಹ್ಮನು ಹುಟ್ಟಿದನು. ಆ ಬ್ರಹ್ಮನಿಗೆ ಮಾನಸಪುತ್ರನಾದ ಅತ್ರಿಮುನೀಶ್ವರನ ನೇತ್ರದಿಂದ ಪುಟ್ಟಿದ ಚಂದ್ರನಿಂದ ಬುಧನು ಹುಟ್ಟಿದನು. ಆ ಬುಧನ ಪುತ್ರನಾದ ಪುರೂರವಸ್ಸಿಗೆ ಆಯುಮಹಾರಾಯನೆಂಬ ಸುತನುಂಟಾದನು. ಆತನ ಪುತ್ರನಾದ ನಹುಷಮಹಾರಾಯನಿಗೆ ಯಯಾತಿರಾಯನೆಂಬ ತನುಜನು ಜನಿಸಿದನು. ಆ ಯಯಾತಿರಾಯನಿಗೆ ದೇವಯಾನಿ, ಶರ್ಮಿಷ್ಠೆ ಎಂಬ ಇರ್ವರು ಪತ್ನಿಯರು ಇದ್ದರು. ಅವರಿರ್ವರುಗಳಲ್ಲಿ ದೇವಯಾನಿ ಎಂಬವಳಿಗೆ ಯದು, ತುರ್ವಸು ಎಂಬಿರ್ವರು ಸುತರೂ, ಮಾಧವಿ ಎಂಬೊರ್ವ ಪುತ್ರಿಯೂ ಉಂಟಾದರು. ಶರ್ಮಿಷ್ಠೆ ಎಂಬವಳಿಂದ ಅನು, ಧ್ರುಹ್ಯು, ಪೂರು ಎಂಬದಾಗಿ ಮೂರು ಮಂದಿ ಪುತ್ರರು ಪುಟ್ಟಿದರು. ಆ ಮೂರನೆಯ ಪೂರು ಎಂಬವನ ವಂಶದಲ್ಲಿ ಪುಟ್ಟಿದವರು ಪೌರವರು ಎಂಬದಾಗಿ ಪ್ರಸಿದ್ಧರಾಗಿದ್ದರು. ದೇವಯಾನಿಗೆ ಜ್ಯೇಷ್ಠಪುತ್ರನಾದ ಯದು ಮಹಾರಾಯನ ಪತ್ನಿಯಾದ ಧರ್ಮವತಿಯಲ್ಲಿ ಸಹಸ್ರಜಿತ್, ಕ್ರೋಷ್ಟು, ಅನಲ, ರಿಪು ಎಂಬದಾಗಿ ನಾಲ್ಕುಜನ ಸುತರು ಜನಿಸಿದರು. ಆ ನಾಲ್ಕು ಮಂದಿಯಲ್ಲಿ ಎರಡನೆಯ ಮಗನಾದ ಕ್ರೋಷ್ಟುಮಹಾರಾಯನಿಗೆ ವೃಜಿನವಾಮ್ ಎಂಬ ಸುತನುಂಟದನು. ಆತನ ಪುತ್ರ ಶ್ಯಾಹಿ ಎಂಬವನಿಗೆ ರೂಪಕನೆಂಬ ಪುತ್ರನು ಉದ್ಭವಿಸಿದನು. ಆತನ ಪುತ್ರನಾದ ಚಿತ್ರರಥನೆಂಬವನಿಗೆ ಶಶಿಬಿಂದುರಾಯನೆಂಬ ತನಯನುಂಟಾದನು. ಈ ಶಶಿಬಿಂದುರಾಯನ ಮಗನಾದ ಪೃಥುಶ್ರವಸ್ಸು ಎಂಬವನಿಗೆ ಧರ್‍ಮನೆಂಬ ಮಗನುಂಟಾದನು. ಆತನ ಪುತ್ರನು ಉಶನಸ್ಸು ; ಈತನಿಗೆ ಸಿತನೆಂದು ನಾಮಾಂತರ ಉಂಟು. ಆ ಸಿತನ ಪುತ್ರನು ರುಚಿಕನು. ಆ ರುಚಿಕನ ಪುತ್ರನು ರುಕ್ಮಕವಚನು. ರುಕ್ಮಕವಚನ ಮಗನು ಪರಾಜಿತ್ ಎಂಬವನು.ಆ ಪರಾಜಿತ್ ಎಂಬವನ ಸುತನು ಜ್ಯಾಮಘನು.ಆತನ ಸುತನು ವಿದರ್ಭನು, ಆ ವಿದರ್ಭನ ತನಯನು ಕ್ರಥನ. ಕ್ರಥನ ಪುತ್ರನು ಕುಂತೀಭೋಜನು. ಆ ಕುಂತೀಭೋಜನ ಮಗನು ವೃಷ್ಣಿ ಎಂಬವನು. ಆತನ ಪುತ್ರನು ನಿರ್ವೃತಿಯು. ಅವನ ಪುತ್ರನು ದಶಾರ್ಹನು. ದಶಾರ್ಹನಿಂದ ವ್ಯೋಮಕನು, ವ್ಯೋಮಕನಿಂದ ಜೀಮೂತನು, ಜೀಮೂತನಿಂದ ವಿಕೃತಿಯು, ವಿಕೃತಿಯಿಂದ ಭೀಮರಥನು, ಭೀಮರಥನಿಂದ ನವರಥನು, ನವರಥನಿಂದ ದಶರಥನು, ದಶರಥನಿಂದ ಶಕುನಿಯು, ಶಕುನಿಯಿಂದ ಕರಂಭಿಯು, ಕರಂಭಿಯಿಂದ ದೇವರಾತನು, ದೇವರಾತನಿಂದ ದೇವಕ್ಷತ್ರನು. ದೇವಕ್ಷತ್ರನಿಂದ ಮಧು ಎಂಬವನು, ಮಧು ಎಂಬವನಿಂದ ಕುಕುರನೆಂಬವನು, ಕುಕುರನಿಂದ ಅನು ಎಂಬವನು. ಅನು ಎಂಬವನಿಂದ ಪುರುಹೂತನು, ಪುರುಹೂತನಿಂದ ಅಂಶನೆಂಬವನು. ಆ ಅಂಶನ ಪುತ್ರನು ಸಾತ್ವತನು, ಸಾತ್ವತನ ಮಗನು ಭಜಮಾನನು. ಭಜಮಾನನ ತನಯನು ವಿಡೂರಥನು, ಈತನಿಗೆ ಶೂರಾಗ್ರ್ಯನು. ಆತಂಗೆ ಶಮಿ, ಶಮಿಯ ಪುತ್ರನು ಪ್ರತಿಚ್ಛತ್ರನು, ಪ್ರತಿಚ್ಛತ್ರನ ಪುತ್ರನು ಸ್ವಯಂಭೋಜನು. ಸ್ವಯಂಭೋಜನ ಮಗನು ಹೃದೀಕನು. ಹೃದೀಕನ ತನಯನು ದೇವಮೀಡನು, ದೇವಮೀಡನ ಸುತನು ಶೂರನೆಂಬವನು. ಶೂರನ ಪುತ್ರನು ವಸುದೇವನು. ಆ ವಸುದೇವನ ಪತ್ನಿಯಾದ ದೇವಕಿಯ ಗರ್ಭದಲ್ಲಿ ಶ್ರಾವಣ ಬಹುಳ ೮ ಭುಧವಾರ ರೋಹಿಣೀ ನಕ್ಷತ್ರದೊಳ್ ವೃಷಭಲಗ್ನದಲ್ಲಿ ಚಂದ್ರೋದಯ ಕಾಲದೊಳ್ ಭಕ್ತರಿಗೆ ಸಕಲೇಷ್ಟಾರ್ಥಂಗಳಂ ಕೊಡುವ ಸಾಕ್ಷಾನ್ಮಾರಾಯಣನೇ ಭೂಭಾರ ಪರಿಹಾರವಂ ಮಾಡಿ ಧರ್ಮಸಂಸ್ಥಾಪನೆಯಂ ಮಾಡಲೋಸುಗ ಶ್ರೀಕೃಷ್ಣನೆಂಬ ನಾಮಧೇಯದಿಂದ ಅವಿರ್ಭವಿಸಿದನು. ಆ ಕೃಷ್ಣನಿಗೆ ಎಂಟುಮಂದಿ ಪಟ್ಟಮಹಿಷಿಯರುಂಟಾದರು. ಅವರೊಳ್ ಮುಖ್ಯಳಾದ ರುಕ್ಮಿಣೀ ದೇವಿಯಲ್ಲಿ ಸರ್ವಲೋಕ ಪ್ರಸಿದ್ಧನಾದ ಮನ್ಮಥನವತಾರವಾದ ಪ್ರದ್ಯುಮ್ನ ನೆಂಬ ಪುತ್ರನು ಜನಿಸಿದನು. ಆಪ್ರದ್ಯುಮ್ನನ ಪುತ್ರನು ಅನಿರುದ್ಧನು. ಆ ಅನಿರುದ್ಧನ ಮಗನು ವಜ್ರನು, ಆ ವಜ್ರನ ಸುತನು ಪ್ರತಿಬಾಹು ಎಂಬವನು, ಪ್ರತಿಬಾಹುವಿನ ತನಯನು ಸುಬಾಹು ಎಂಬವನು. ಸುಬಾಹು ಪುತ್ರನು ಉಗ್ರಸೇನನು , ಉಗ್ರಸೇನನ ಮಗನು ಶೃತಸೇನನು.

ಯದುರಾಯರ ಜನನ:

ಈ ಪರಿಯಾಗಿ ಮಹಾವಿಷ್ಣು ಮೊದಲ್ಗೊಂಡು ಪುಟ್ಟಿದ ದೊರೆಗಳು ಶೃತಸೇನರಾಯನವರೆಗೆ ಅರುವತ್ತುಮೂರು ಜನ. " ಮುಂದೆ ಕಲಿಯುಗದಲ್ಲಿ ಈ ಶೃತಸೇನರಾಯನ ವಂಶದೊಳ್ ಅನೇಕ ಕ್ಷತ್ರಿಯೋತ್ತಮರು ಜನಿಸಿ ಭೂಮಿಯಂ ರಕ್ಷಿಸುವರು" ಎಂಬೀವಚನಕ್ಕನುಸಾರವಾಗಿ ಆ ಶೃತಸೇನರಾಯನ ವಂಶದಲ್ಲಿ ಪುಟ್ಟಿ ಅತ್ಯಂತ ಪರಾಕ್ರಮಶಾಲಿಯಾದ ಯದುವೀರರಾಯನೆಂಬ ದೊರೆಯು ಧರ್‍ಮದಿಂ ಪ್ರಜೆಗಳಂ ರಕ್ಷಿಸುತ್ತಿದನು. ಆ ಯದುವೀರರಾಯನಿಗೆ ಭದ್ರಸೇನನೆಂಬ ಪುತ್ರನುಂಟಾದನು. ಆ ಭದ್ರಸೇನನ ಮಗನು ಸಹಸ್ರಜಿತ್ ಎಂಬವನು. ಸಹಸ್ರಜಿತ್ ಎಂಬವನ ಪುತ್ರನು ಬೃಹತ್ಸೇನನು. ಬೃಹತ್ಸೇನನ ಪುತ್ರನು ಬೃಹದ್ಭಾನು ಎಂಬವನು. ಬೃಹದ್ಭಾನು ಪುತ್ರನು ಅಪರಾಜಿತನೆಂಬವನು. ಅಪರಾಜಿತನ ಮಗನು ಪ್ರದ್ಯೋತನನು. ಪ್ರದ್ಯೋತನನ ಸುತನು ಸುಮಿತ್ರನೆಂಬವನು. ಸುಮಿತ್ರನ ಪುತ್ರನು ವಸುಮಿತ್ರನು. ವಸುಮಿತ್ರನ ತನುಜನು ಭದ್ರಾಸ್ಯನೆಂಬವನು. ಭದ್ರಾಸ್ಯನ ಮಗನು ರಾಜದೇವನು. ಆ ರಾಜದೇವನಿಗೆ ಯದುರಾಯ, ಕೃಷ್ಣರಾಯರೆಂಬಿರ್‍ವರು ಪುತ್ರರು ಜನಿಸಿದರು. ಇವರೊಳು ಸ್ವಸ್ತಿಶ್ರೀ ವಿಜಯಾಭ್ಯುದಯ ಶಾಲಿವಾಹನಶಕ ೧೨೯೩ಕ್ಕೆ ಸಲ್ಲುವ ಸಾಧಾರಣ ಸಂವತ್ಸರದ ಮಾಘ ಶುದ್ಧ ತೃತೀಯೆಯಲ್ಲಿ ಜನಿಸಿದ ಯದುರಾಯರು ಕರ್ಣಾಟಕ ದೇಶಾಧೀಶ್ವರಾದ ಈ ಮೈಸೂರು ಮಹಾರಾಜರವರ ವಂಶಕ್ಕೆ ಮೂಲಪುರುಷರಾದರು.

~~~+++~~~

No comments: